ಜಾಸಿಡೀ	 -
 	ಹೋಮಾಪ್ಟರ ಗಣದ ಒಂದು ಮುಖ್ಯ ಕುಟುಂಬ. ಇದಕ್ಕೆ ಸಿಕಾಡೆಲಿಡೀ ಎಂಬ ಹೆಸರೂ ಉಂಟು. ಇದಕ್ಕೆ ಸೇರಿದ ಕೀಟಗಳಿಗೆ ಎಲೆಜಿಗಿ ಕೀಟಗಳು (ಲೀಫ್‍ಹಾಪರ್ಸ್) ಎಂದು ಹೆಸರು. ಇವುಗಳ ಸರಾಸರಿ ಗಾತ್ರ 1/4". ತಲೆ ಅಗಲ. ಶರೀರ ಬೆಣೆಯಾಕಾರ, ಮೈಬಣ್ಣ ಹಸಿರು, ಹಳದಿ, ಕಪ್ಪು, ಬಿಳಿ, ಬೂದು-ಹೀಗೆ ವೈವಿಧ್ಯಮಯ. ಅಲ್ಲಲ್ಲಿ ಚುಕ್ಕೆ ಅಥವಾ ಗೆರೆಗಳಿರುವುದು. ಇವು ಹೆಚ್ಚಾಗಿ ಹಸಿರು ಎಲೆ ಹುಲ್ಲು ಮುಂತಾದವುಗಳ ಮೇಲೆ ಕುಳಿತಿರುತ್ತವೆ. ಬಾಯಿ ಅಂಗಗಳು ಆಹಾರವನ್ನು ಚುಚ್ಚಿ ಹೀರುವುದಕ್ಕೆ ಅನುಕೂಲವಾಗಿವೆ. ಹಿಂದಿನ ಕಾಲಿನ ಮೊಣಕಾಲಿನ ಮೇಲೆ ಉದ್ದಕ್ಕೂ ಎರಡು ಸಾಲು ಮುಳ್ಳುಗಳಿರುವುದು ಇವುಗಳ ವಿಶಿಷ್ಟ ಲಕ್ಷಣ. ಹಳದಿ ಮಿಶ್ರಿತ ಹಸಿರು ಬಣ್ಣದ ಮತ್ತು ನೀಳವಾದ ಮೊಟ್ಟೆಗಳನ್ನು ಎಲೆಗಳ ಒಳ ಆವರಣದಲ್ಲಿ ಸಾಲುಸಾಲಾಗಿ ಇಡುತ್ತವೆ.ಈ ಕುಟುಂಬದ ಕೆಲವು ಕೀಟಗಳು ಬೆಳೆಗಳಿಗೆ ಬಹಳ ಹಾನಿಕರವೆನಿಸಿವೆ. ಉದಾಹರಣೆಗೆ ಬತ್ತದ ಪೈರಿಗೆ ಬೀಳುವ ನೆಫೊಟೇಟಿಕ್ಸ್, ಹತ್ತಿ ಹರಳು ಆಲೂಗೆಡ್ಡೆ ಸೇಬು ಮುಂತಾದವಕ್ಕೆ ಅಂಟುವ ಎಂಪೊವಾಸ್ಕ, ಮಾವಿನ ಮರಕ್ಕೆ ಹತ್ತುವ ಇಡಿಯೊಸಿರಸ್ ಇತ್ಯಾದಿ. ಅಲ್ಲದೆ ಹಲವಾರು ಪೈರುಗಳಿಗೆ ಬರುವ ವೈರಸ್ ರೋಗಗಳನ್ನು ಕೂಡ ಈ ಕುಟುಂಬದ ಕೀಟಗಳು ಹರಡುತ್ತವೆ ಎಂದು ಹೇಳಲಾಗಿದೆ. 

5% ಡಿಡಿಟಿ, 2% ಪ್ಯಾರತಯಾನ್,50% ಮ್ಯಾಲತಯಾನ್ ಮುಂತಾದವನ್ನು ಉಪಯೋಗಿಸಿ ಈ ಕೀಟಗಳನ್ನು ನಾಶಪಡಿಸಬಹುದು.
(ಜಿ.ಕೆ.ವಿ.; ಎಸ್.ಐ.ಎಚ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ